Telegram Join My Telegram WhatsApp Join My WhatsApp

ಇಸ್ಕಾನ್ ಸಹಯೋಗದಲ್ಲಿ ಬೆಂಗಳೂರಿನಲ್ಲಿ ಆರೋಗ್ಯ ವೃದ್ಧಿಗೆ ಪೌಷ್ಟಿಕ ಆಹಾರ ಉಪಕ್ರಮ

ಬೆಂಗಳೂರು: ನಗರದ ಆಯ್ದ ಸರ್ಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ಇಲಾಖೆಯು ಪರಿಚಯಿಸಿರುವ ವಿಶೇಷ ಪೌಷ್ಟಿಕ ಆಹಾರ ಯೋಜನೆಗೆ ರೋಗಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಆಹಾರವು ರೋಗಿಗಳ ಆರೋಗ್ಯ ಸುಧಾರಣೆಗೂ ಹಾಗೂ ಶೀಘ್ರ ಚೇತರಿಕೆಗೆ ಸಹಕಾರಿಯಾಗುತ್ತಿದೆ ಎಂದು ತಿಳಿದುಬಂದಿದೆ.

ನಗರದ ಈ ಮೂರು ಆಸ್ಪತ್ರೆಗಳಲ್ಲಿ ಜಾರಿಗೊಂಡ ಹೊಸ ಆಹಾರ ‘ಮೆನು’ಗೆ ರೋಗಿಗಳಿಂದ ಉತ್ತಮ ಪ್ರತಿಕ್ರಿಯೆ ದೊರೆತ ಹಿನ್ನೆಲೆ, ಕಳೆದ ತಿಂಗಳು ಈ ಯೋಜನೆಯನ್ನು ರಾಜ್ಯದ ಇನ್ನೂ ಐದು ಆಸ್ಪತ್ರೆಗಳಿಗೆ ವಿಸ್ತರಿಸಲಾಗಿದೆ. ಈ ಪಟ್ಟಿಯಲ್ಲಿ ನಗರದ ಯಲಹಂಕ ಸಾರ್ವಜನಿಕ ಆಸ್ಪತ್ರೆ ಹಾಗೂ ಕೆ.ಆರ್. ಪುರ ಸಾರ್ವಜನಿಕ ಆಸ್ಪತ್ರೆಯೂ ಸೇರಿವೆ. ಪ್ರಸ್ತುತ ಬೆಂಗಳೂರಿನ ಐದು ಸರ್ಕಾರಿ ಆಸ್ಪತ್ರೆಗಳಲ್ಲಿ ಪೌಷ್ಟಿಕ ಆಹಾರ ವಿತರಣೆ ನಡೆಯುತ್ತಿದೆ.

ಈ ಹಿಂದೆ ಆಸ್ಪತ್ರೆಗಳ ಕಿಚನ್‌ಗಳಲ್ಲಿಯೇ ಊಟ-ತಿಂಡಿಗಳನ್ನು ತಯಾರಿಸಿ ವಿತರಿಸಲಾಗುತ್ತಿತ್ತು. ಒಂದೇ ರೀತಿಯ ಆಹಾರ ಹಾಗೂ ಅದರ ಗುಣಮಟ್ಟದ ಕುರಿತು ರೋಗಿಗಳಿಂದ ಅನೇಕ ದೂರುಗಳು ಕೇಳಿಬರುತ್ತಿದ್ದವು. ಪರಿಣಾಮವಾಗಿ ಹೆಚ್ಚಿನ ಪ್ರಮಾಣದ ಆಹಾರ ವ್ಯರ್ಥವಾಗುತ್ತಿತ್ತು.

ಇದೀಗ ಇಸ್ಕಾನ್ ತನ್ನ ಕೇಂದ್ರೀಕೃತ ಅಡುಗೆಮನೆಯಲ್ಲಿ ಊಟ-ತಿಂಡಿಗಳನ್ನು ತಯಾರಿಸಿ, ನಿಗದಿತ ಸಮಯಕ್ಕೆ ಆಸ್ಪತ್ರೆಗಳಿಗೆ ಪೂರೈಸುತ್ತಿದೆ. ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಊಟ, ಸಂಜೆ ಲಘು ಉಪಾಹಾರ ಹಾಗೂ ರಾತ್ರಿ ಊಟವನ್ನು ಒದಗಿಸಲಾಗುತ್ತಿದೆ. ಇದರಿಂದ ಆಸ್ಪತ್ರೆಗಳ ಮುಖ್ಯಸ್ಥರಿಗೆ ಊಟ-ತಿಂಡಿಯ ನಿರ್ವಹಣೆಯ ಹೊಣೆಗಾರಿಕೆ ಕಡಿಮೆಯಾಗಿದೆ.

ಇಸ್ಕಾನ್‌ನಿಂದ ಆಹಾರ ಬಂದ ಬಳಿಕ, ಅದರ ಮಾದರಿಯನ್ನು ಮೊದಲು ಆಸ್ಪತ್ರೆಯ ಮುಖ್ಯಸ್ಥರಿಗೆ ಪರಿಶೀಲನೆಗಾಗಿ ನೀಡಲಾಗುತ್ತದೆ. ಪರಿಶೀಲನೆ ಬಳಿಕವೇ ರೋಗಿಗಳಿಗೆ ವಿತರಿಸಲಾಗುತ್ತದೆ. ಪ್ರತಿ ಆಹಾರ ಕಂಟೇನರ್ ಮೇಲೂ ಅಗತ್ಯ ಮಾಹಿತಿಯನ್ನು ನಮೂದಿಸಲಾಗಿದ್ದು, ವಾರ್ಡ್‌ಗಳಿಗೆ ತೆರಳಿ ರೋಗಿಗಳಿದ್ದಲ್ಲಿಯೇ ಊಟ-ತಿಂಡಿ ವಿತರಣೆ ಮಾಡಲಾಗುತ್ತಿದೆ.

ಹಿಂದೆ ಸರ್ಕಾರಿ ಆಸ್ಪತ್ರೆಗಳ ಆಹಾರವನ್ನು ಮೆಚ್ಚದೆ ಮೂಗು ಮುರಿಯುತ್ತಿದ್ದ ರೋಗಿಗಳು, ಈಗ ನೀಡಲಾಗುತ್ತಿರುವ ವಿಶೇಷ ಪೌಷ್ಟಿಕ ಆಹಾರವನ್ನು ಸಂತೋಷದಿಂದ ಸೇವಿಸುತ್ತಿದ್ದಾರೆ.

(ಐದು ಆಹಾರ ಕ್ರಮ):

ಈ ಯೋಜನೆಯಡಿ ಸಾಮಾನ್ಯ ಆಹಾರ ಕ್ರಮದ ಜೊತೆಗೆ ಚಿಕಿತ್ಸಾ ಆಹಾರ ಕ್ರಮವನ್ನು ರೂಪಿಸಲಾಗಿದೆ. ಗರ್ಭಿಣಿಯರು ಹಾಗೂ ಬಾಣಂತಿಯರ ಆಹಾರ ಕ್ರಮ, ಮಕ್ಕಳ ಆಹಾರ ಕ್ರಮ, ಸಾಮಾನ್ಯ ಆಹಾರ ಕ್ರಮ, ಮಧುಮೇಹಿಗಳ ಆಹಾರ ಕ್ರಮ ಮತ್ತು ಚಿಕಿತ್ಸಾ ಆಹಾರ ಕ್ರಮ ಎಂದು ಆಹಾರವನ್ನು ಐದು ಪ್ರಮುಖ ವಿಭಾಗಗಳಾಗಿ ವಿಂಗಡಿಸಿ ಪೌಷ್ಟಿಕ ಆಹಾರ ಒದಗಿಸಲಾಗುತ್ತಿದೆ.

ಗರ್ಭಿಣಿಯರಿಗೆ ಗರ್ಭಾವಸ್ಥೆಯಲ್ಲಿ ಅಗತ್ಯವಾಗುವ ಕಬ್ಬಿಣಾಂಶ ಮತ್ತು ಫೋಲಿಕ್ ಆಮ್ಲ ಹೆಚ್ಚಿರುವ ಆಹಾರವನ್ನು ನೀಡಲಾಗುತ್ತಿದೆ. ಬಾಣಂತಿಯರಿಗೆ ಹಾಲು ಉತ್ಪಾದನೆ ಹೆಚ್ಚಿಸಲು ಹಾಗೂ ಉತ್ತಮ ಆರೋಗ್ಯಕ್ಕಾಗಿ ಸಹಕಾರಿಯಾಗುವ ಆಹಾರವನ್ನು ಒದಗಿಸಲಾಗುತ್ತಿದೆ.

(ರೋಗಿಗಳ ಅಭಿಪ್ರಾಯ):

“ಪ್ರತಿದಿನ ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟದ ಜೊತೆಗೆ ಸಂಜೆ ಲಘು ಉಪಾಹಾರವೂ ನೀಡಲಾಗುತ್ತಿದೆ. ಸಮಯಕ್ಕೆ ಸರಿಯಾಗಿ ಪೂರೈಸುವ ಜೊತೆಗೆ, ಆಹಾರದ ಗುಣಮಟ್ಟವೂ ಉತ್ತಮವಾಗಿದೆ” ಎಂದು ರೋಗಿಗಳು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪೌಷ್ಟಿಕ ಆಹಾರ ವಿತರಣೆ ಕಾರ್ಯಕ್ಕೆ ತೃಪ್ತಿ

ಶಿವಪ್ಪ ಮೇಲ್ವಿಚಾರಕತ್ವದಲ್ಲಿ ಇಸ್ಕಾನ್ ಸಂಸ್ಥೆಯ ಸಹಯೋಗದೊಂದಿಗೆ ಸರ್ ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಸ್ವಚ್ಛ, ರುಚಿಯಾದ ಹಾಗೂ ಪೌಷ್ಟಿಕ ಆಹಾರವನ್ನು ಸಮಯಕ್ಕೆ ಸರಿಯಾಗಿ ವಿತರಿಸಲಾಗುತ್ತಿದೆ. ಈ ಸೇವೆಯಿಂದ ರೋಗಿಗಳಿಗೆ ಮಾತ್ರವಲ್ಲ, ಆಹಾರ ವಿತರಿಸುವ ತಂಡಕ್ಕೂ ಅಪಾರ ತೃಪ್ತಿ ಲಭಿಸುತ್ತಿದೆ ಎಂದು ಸ್ಥಾನಿಕ ವೈದ್ಯಾಧಿಕಾರಿ ಶಶಿಕಲಾ ತಿಳಿಸಿದ್ದಾರೆ. ರೋಗಿಗಳಿಗೆ ಅಗತ್ಯವಿರುವ ಪೋಷಕಾಂಶಗಳನ್ನು ಗಮನದಲ್ಲಿಟ್ಟುಕೊಂಡು ವಿಶೇಷ ಆಹಾರ ‘ಮೆನು’ ರೂಪಿಸಿ ಊಟ–ತಿಂಡಿ ವಿತರಿಸಲಾಗುತ್ತಿದೆ.

ನಿತ್ಯ ವೈವಿಧ್ಯಮಯ ಆಹಾರ ವ್ಯವಸ್ಥೆ

ಆಸ್ಪತ್ರೆಯಲ್ಲಿ ಪ್ರತಿದಿನದ ಆಹಾರ ಮೆನುವನ್ನು ಸಾರ್ವಜನಿಕವಾಗಿ ಪ್ರದರ್ಶಿಸಲಾಗುತ್ತಿದ್ದು, ಅದೇ ಪ್ರಕಾರ ಆಹಾರ ಪೂರೈಕೆ ಮಾಡಲಾಗುತ್ತಿದೆ. ಮೆನುವಿನಲ್ಲಿ ಉಪ್ಪಿಟ್ಟು, ಪೊಂಗಲ್, ಗೋಧಿ ಗಂಜಿ, ರಾಗಿಮುದ್ದೆ, ಚಪಾತಿ, ಅನ್ನ–ಸಾಂಬಾರ್, ಪಲ್ಯ, ಸೋಯಾ ಚಂಕ್ಸ್, ಹಾಲು, ಹಣ್ಣುಗಳು, ಮೊಸರು, ಬಿಸ್ಕತ್ ಹಾಗೂ ಚಿಕ್ಕಿ ಸೇರಿವೆ.

ನಿಗದಿತ ಸಮಯಕ್ಕೆ ಆಹಾರ ವಿತರಣೆ

ಬೆಳಿಗ್ಗೆ 8 ಗಂಟೆಗೆ ತಿಂಡಿ ನೀಡಲಾಗುತ್ತದೆ. ಮಧ್ಯಾಹ್ನ 11 ಗಂಟೆಗೆ ಮಜ್ಜಿಗೆ, ಹಾಲು ಮತ್ತು ಹಣ್ಣುಗಳನ್ನು ವಿತರಿಸಲಾಗುತ್ತದೆ. ಮಧ್ಯಾಹ್ನ 12 ಗಂಟೆಯ ನಂತರ ಊಟ, ಸಂಜೆ 4 ಗಂಟೆಯ ಬಳಿಕ ಹಾಲು ಅಥವಾ ಚಹೆಯೊಂದಿಗೆ ಬಿಸ್ಕತ್ ಅಥವಾ ಚಿಕ್ಕಿ, ಹಾಗೂ ರಾತ್ರಿ 7.30ರ ನಂತರ ಊಟ ಒದಗಿಸಲಾಗುತ್ತಿದೆ. ಮಧುಮೇಹಿಗಳು, ಗರ್ಭಿಣಿಯರು, ಬಾಣಂತಿಯರು, ಮಕ್ಕಳು ಹಾಗೂ ಸಾಮಾನ್ಯ ರೋಗಿಗಳಿಗೆ ಪ್ರತ್ಯೇಕ ಪಥ್ಯಾಹಾರ ವ್ಯವಸ್ಥೆ ಮಾಡಲಾಗಿದೆ.

ಆಹಾರ ವೆಚ್ಚ ವಿವರ

ರೋಗಿಗಳಿಗೆ ಒದಗಿಸಲಾಗುತ್ತಿರುವ ಪೌಷ್ಟಿಕ ಆಹಾರದ ವೆಚ್ಚವನ್ನು ಆರೋಗ್ಯ ಇಲಾಖೆ ಇಸ್ಕಾನ್‌ಗೆ ಪಾವತಿಸುತ್ತಿದೆ. ಸಾಮಾನ್ಯ ರೋಗಿಗೆ ಉಪಾಹಾರಕ್ಕೆ ₹45, ಮಕ್ಕಳಿಗೆ ₹30 ನಿಗದಿಪಡಿಸಲಾಗಿದೆ. ಮಧ್ಯಾಹ್ನದ ಊಟ ಸಾಮಾನ್ಯ ರೋಗಿಗೆ ₹52 ಆಗಿದ್ದರೆ, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ನೀಡುವ ಊಟಕ್ಕೆ ₹60 ಪಾವತಿಸಲಾಗುತ್ತಿದೆ. ದಿನವೊಂದಕ್ಕೆ ಸಾಮಾನ್ಯ ರೋಗಿಗೆ ₹183 ವೆಚ್ಚವಾಗುತ್ತಿದ್ದು, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ₹225 ವೆಚ್ಚ ಮಾಡಲಾಗುತ್ತಿದೆ.

ಆಸ್ಪತ್ರೆ ದಾಖಲಾತಿಯಲ್ಲಿ ಹೆಚ್ಚಳ

ಆರೋಗ್ಯ ಇಲಾಖೆ ಪರಿಚಯಿಸಿರುವ ಈ ವಿಶೇಷ ಪೌಷ್ಟಿಕ ಆಹಾರ ಯೋಜನೆ ರೋಗಿಗಳ ಆರೋಗ್ಯ ವೃದ್ಧಿಗೆ ಬಹಳ ಸಹಕಾರಿಯಾಗಿದೆ. ಪ್ರತಿದಿನವೂ ಮೆನುವಿನಲ್ಲಿ ಬದಲಾವಣೆ ಮಾಡಿ ಅಗತ್ಯ ಪೋಷಕಾಂಶಗಳಿಗೆ ತಕ್ಕಂತೆ ಆಹಾರ ಪೂರೈಕೆ ಮಾಡಲಾಗುತ್ತಿದೆ. ರೋಗಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಇನ್ನಷ್ಟು ದಿನ ಆಸ್ಪತ್ರೆಯಲ್ಲಿ ಉಳಿದು ಚೇತರಿಸಿಕೊಂಡು ಹೋಗುವುದಾಗಿ ಹಲವರು ಹೇಳುತ್ತಿದ್ದಾರೆ. ಇದರ ಪರಿಣಾಮವಾಗಿ ಆಸ್ಪತ್ರೆಯ ದಾಖಲಾತಿಯೂ ಹೆಚ್ಚಳವಾಗಿದೆ ಎಂದು ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ್ ಕೆ.ಎಸ್. ತಿಳಿಸಿದ್ದಾರೆ.

ರೋಗಿಗಳ ಅಭಿಪ್ರಾಯ

ಎಚ್‌ಎಎಲ್ ನಿವಾಸಿ ಸೆಲ್ವಿ ಅವರು, “ವಿಶೇಷ ಪೌಷ್ಟಿಕ ಆಹಾರ ಯೋಜನೆಯಡಿ ನೀಡಲಾಗುತ್ತಿರುವ ಊಟ–ತಿಂಡಿ ಗುಣಮಟ್ಟದಿಂದ ಕೂಡಿದೆ. ಆಹಾರವನ್ನು ವ್ಯರ್ಥ ಮಾಡದೆ ಸೇವಿಸುತ್ತಿದ್ದೇವೆ. ಹೊರಗಡೆಯಿಂದ ಊಟ ತರಿಸಿಕೊಳ್ಳುವ ಅಗತ್ಯವೇ ಇಲ್ಲ” ಎಂದು ಹೇಳಿದರು.

ಕಮನಳ್ಳಿ ನಿವಾಸಿ ಶಿವಾಜಿ ಅವರು, “ಇಸ್ಕಾನ್‌ನವರು ಆಹಾರವನ್ನು ಸಮಯಕ್ಕೆ ಸರಿಯಾಗಿ ಒದಗಿಸುತ್ತಿದ್ದಾರೆ. ಆಹಾರದಲ್ಲಿ ಸಾಕಷ್ಟು ಪೋಷಕಾಂಶಗಳಿರುವುದರಿಂದ ಆರೋಗ್ಯ ಸುಧಾರಣೆಗೆ ಸಹಕಾರಿಯಾಗಿದೆ. ಇಂತಹ ವ್ಯವಸ್ಥೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಇರಬೇಕು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Leave a Comment